Govt. of Karnataka - HR & CE Department
ಕರ್ನಾಟಕ ಸರಕಾರ - ಧಾರ್ಮಿಕ ಧತ್ತಿ ಇಲಾಖೆ
Phone : +91 9480 757 516      Email : info@mrutyunjayeshwaratemple.com

ಮೃತ್ಯುಂಜಯ ಹೋಮ ಮಹಿಮೆ

ಮೃತ್ಯುಂಜಯ ನಮಸ್ತುಭ್ಯಂ, ಮೃತ್ಯುಂ ಹರ ನಮಾಮ್ಯಹಂ ||
ಸರ್ವ ಮೃತ್ಯು ವಿನಾಶಾಯ ಮೃತ್ಯುಂಜಯ ನಮೋ ನಮಃ ||

narimogaru-homa-photo

 

ಶ್ರೀ ಮೃತ್ಯುಂಜಯ ದೇವರನ್ನು ಯಾರು ಅನನ್ಯ ಭಕ್ತಿಯಿಂದ ಪ್ರಾರ್ಥಿಸುತ್ತಾರೋ ಅವರು ಅಪಮೃತ್ಯು, ವ್ಯಾಲಮೃತ್ಯು, ಘೋರಮೃತ್ಯು, ಕ್ಷುದ್ರಮೃತ್ಯು, ಪೈಶಾಚಿಕಮೃತ್ಯು, ದುಷ್ಠಮೃತ್ಯು, ಮತ್ತು ಕಾಲಮೃತ್ಯು, ಎಂಬ ಏಳು ಬಗೆಯ ಮೃತ್ಯುಭಯಗಳಿಂದ ಮುಕ್ತರಾಗಿ ಶ್ರೀ ಮೃತ್ಯುಂಜಯೇಶ್ವರನಲ್ಲಿ ಮೋಕ್ಷವನ್ನು ಹೊಂದುತ್ತಾರೆ ಎಂಬುವುದು ಸನಾತನ ನಂಬಿಕೆ.    “ಜಾತಸ್ಯ ಮರಣಂ ಧ್ರುವಂ” ಎಂಬಂತೆ ಹುಟ್ಟಿದವನು ಎಂದಾದರೂ ಸಾಯಲೇ ಬೇಕು. ಆದರೆ ಈ ಹುಟ್ಟು ಸಾವುಗಳ ನಡುವೆ “ಅನಾಯಾಸೇನ ಮರಣಂ, ವಿನಾಃ ದೈನ್ಯೇನ ಜೀವನಂ” ಎಂಬಂತೆ ಇರಬೇಕು. ಜೀವನದಲ್ಲಿ ಭಯ. ಶೋಕ, ಮನಸ್ತಾಪ ಮತ್ತು ದಾರಿದ್ರ್ಯಗಳು ಬಾರದಿರಲು ಭಗವಂತನ ಚಿಂತನೆ ಹಾಗೂ ಸತ್ಕಾರ್ಯಗಳಲ್ಲಿ ಭಾಗಿಯಾಗುವುದು ಅತೀ ಅವಶ್ಯಕ. ಜೀವನ  ನೆಮ್ಮದಿಯಾಗಿ ಕಳೆಯಲು ದೈವಾನುಗ್ರಹವಿರಲೇಬೇಕು.    ಜೀವಾತ್ಮಕ್ಕೆ ರೂಪು ಕೊಟ್ಟು ಸೃಷ್ಠಿಗೆ ಕಾರಣ ಬ್ರಹ್ಮನಾದರೆ, ಜೀವಿತ ಕಾಲದ ರಕ್ಷಕನು ವಿಷ್ಣು ಹಾಗೂ ಅಂತ್ಯ ಕಾಲಕ್ಕೆ ಮೋಕ್ಷಕ್ಕೆ ಕಾರಣನು ಶಿವನೂ ಆಗಿರುತ್ತಾನೆ. ಮಾನವಜನ್ಮದ ಕೊನೆಗಾಲದಲ್ಲಿ ಅವಸಾನವು ನಿಶ್ಚಿತವಾದರೂ ಅವರವರು ಕರ್ಮಾನುಸಾರ ಅನುಭವಿಸಬೇಕಾದ ಫಲಗಳನ್ನು ಅನುಭವಿಸಲೇ ಬೇಕಾಗುತ್ತದೆ.  ಜೀವಿತ ಕಾಲದಲ್ಲಿ ಅಜ್ಞಾನದ ಅಂಧಕಾರ ಹಾಗೂ ಮಾಯೆಯ ಮುಸುಕಿನಿಂದಾಗಿ ತಿಳಿದೋ ತಿಳಿಯದೆಯೋ ಮನುಷ್ಯನು ಮಾಡುವ ಪುಣ್ಯ ಅಥವಾ ಪಾಪಕರ್ಮಗಳಿಗೆ ಅನುಸಾರವಾಗಿ ಪ್ರತಿಫಲವನ್ನು ಪಡೆದೇ ತೀರುತ್ತಾನೆ.
ಸ್ವರ್ಗ-ನರಕಗಳೆರಡರ ಫಲಗಳ ಬಹುಪಾಲನ್ನು ಮನುಷ್ಯನು ತನ್ನ ಪ್ರಕೃತ ಅಥವಾ ಪೂರ್ವಜನ್ಮದ ಕರ್ಮನುಸಾರ ಪ್ರಕೃತ ಜನ್ಮದಲ್ಲೇ ಪಡೆಯುತ್ತಾನೆ ಶೇಷಭಾಗದಲ್ಲಿ ಒಂದು ಭಾಗ ಮರಣಕಾಲದಲ್ಲೂ ಉಳಿದಂತೆ ಮರಣಾನಂತರ ಜೀವಾತ್ಮನು ತನ್ನ ಊರ್ಧ್ವ ಪ್ರಯಾಣ ಕಾಲದಲ್ಲೂ ಪಡೆಯುತ್ತಾನೆಂದು ಗರುಡ ಪುರಾಣ ವಿವರಿಸಿದೆ.    ಹೀಗಿರುವಲ್ಲಿ ಮನುಷ್ಯನು ತನ್ನ ಪೂರ್ವ ಜನ್ಮ ಹಾಗೂ ಈ ಜನ್ಮದ ಜೀವಿತ ಕಾಲದಲ್ಲಿ ತಿಳಿದೋ ತಿಳಿಯದೆಯೋ ಮಾಡಿರುವ ಪಾಪ ಕರ್ಮ, ಶೇಷಗಳಿಂದ ಮುಕ್ತನಾಗಿ ಪರಿಹಾರ ಹೊಂದಲು “ಶ್ರೀ ಮೃತ್ಯುಂಜಯ ಹೋಮ”ವನ್ನು ವಿಶೇಷವಾಗಿ ಯಾವುದೇ ಶ್ರೀ ಮೃತ್ಯುಂಜಯೇಶ್ವರ ಕ್ಷೇತ್ರದಲ್ಲಿ ಮಾಡಿಸಿ ಪ್ರಸಾದ ಸ್ವೀಕರಿಸಿದಲ್ಲಿ ಆತನಿಗೆ ದೈವಾನುಗ್ರಹವು ಒದಗಿ ಮೃತ್ಯು ಭಯಗಳು ದೂರವಾಗುತ್ತವೆ. ಮನೋಸ್ಥೈರ್ಯ ವೃದ್ಧಿಗೊಂಡು ಸನ್ಮಾರ್ಗದಲ್ಲಿ ನಡೆಯುವಂತಾಗುತ್ತದೆ ಹಾಗೂ ಪೂರ್ಣ ಜೀವನ ನಡೆಸುವಂತಾಗಿ ಮೋಕ್ಷ ಪ್ರಾಪ್ತಿ ಹೊಂದುವರೆಂದು ವೇದ ಪುರಾಣಗಳು ಆಧಾರ ಸಹಿತ ವಿವರಣೆಯನ್ನೀಯುತ್ತವೆ.