ಶ್ರೀ ಮೃತ್ಯುಂಜಯೇಶ್ವರ
ಮೃತ್ಯುಂಜಯನೆ ನೀನೆಮ್ಮ
ನಿತ್ಯವು ಕಾಯೋ ಭಗವಂತ ||ಪ||
ಪುತ್ತೂರ ನರಿಮೊಗರಿನಲಿ
ಎತ್ತರ ಕ್ಷೇತ್ರದಿ ನೆಲೆನಿಂತು
ಸುತ್ತಲ ಹಸಿರಿನ ಉಸಿರಲಿ
ಸುತ್ತುತ ಸಲಹೋ ಭಗವಂತ
ಪುರಾಣದ ಕಥೆಯು ಇಂತಿಹುದು
ಖರಾಸುರನೆಂಬ ದಾನವನು
ಹರ ನಿನ್ನನು ಕುರಿತು ತಪಗೈದು
ವರವನು ಪಡೆದನು ಮುದದಿಂದ
ಮೃತ್ಯುಂಜಯನೆ ನೀನೊಲಿದು
ಭೃತ್ಯನ ಹರಸಿದೆ ನೀನಂದು
ನೃತ್ಯವನಾಡಿ ನಟರಾಜ
ಮೃತ್ಯುಂಜಯ ನೀ ನೆಲೆಯಾದೆ
ಹರಸಲು ಹರನು ಕ್ಷಣದಲ್ಲಿ
ಧರಿಸುತ ಅಸುರನು ಜಿಹ್ಹೆಯಲ್ಲಿ
ಇರಿಸಿದ ಲಿಂಗವ ಭುವಿಯಲ್ಲಿ
ಮೆರೆದಿಹ ಕ್ಷೇತ್ರದ ಮಹಿಮೆಯನು
ಕಲಿಯುಗದಲಿ ಸಾವಿರ ವರುಷ
ಕಳೆದ ಪುರಾಣದ ದೇಗುಲವು
ಇಳೆಯೊಳು ನಂಬಿಹ ಭಕುತರಿಗೆ
ಒಳಿತನು ತೋರಿದೆ ಪ್ರತಿಕ್ಷಣವು
ಸತ್ಯದ ಮಹಿಮೆಯ ನೀ ತೋರಿರುವೆ
ಜ್ಯೋತಿಯೆ ಆಗಿ ಬೆಳಗಿರುವೆ
ಕ್ಷೇತ್ರದಿ ನೆಲೆಸಿ ಹೊಳೆದಿರುವೆ
ಮೃತ್ಯುಂಜಯ ನಿನ್ನನೆ ನಂಬಿರುವೆ
ಶಕ್ತಿಯ ರೂಪನೆ ಮಹದೇವ
ಭಕ್ತಿಯ ನಮನವು ಹೇ ದೇವ
ಲೋಕದ ಜೀವಿಗಳೆಲ್ಲರಿಗೆ
ಸುಖ ಶಾಂತಿಯ ಕರುಣಿಸು ನೀನೀಗ
ಭಕ್ತರ ಭಕ್ತಿಯ ಒರೆಯಿಟ್ಟೆ
ಶಕ್ತಿಯ ಅವರಲಿ ತುಂಬಿಟ್ಟೆ
ಯುಕ್ತರ ಪಡೆಗೆ ಬಲ ಕೊಟ್ಟೆ
ಶಕ್ತನೆ ಕ್ಷೇತ್ರದಿ ನೆಲೆನೆಟ್ಟೆ
ಸುಗುಣವು ಬೆಳೆಯಲಿ ಮನುಜರಲಿ
ಭಗವಂತನು ಮನದಲಿ ನೆಲೆಸಿರಲಿ
ಜಗದಲಿ ಸಮರಸ ತುಂಬಿರಲಿ
ಅಗಣಿತ ಮಹಿಮನೆ ಕೃಪೆಯಿರಲಿ