About
ಕ್ಷೇತ್ರ ಪರಿಚಯ ಹಾಗೂ ಸ್ಥಳ ಪುರಾಣ:
ಈ ಕ್ಷೇತ್ರವು ಪುತ್ತೂರು ತಾಲೂಕು ಕೇಂದ್ರದಿಂದ ಶ್ರೀ ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರಕ್ಕೆ ಹೋಗುವ ರಾಜ್ಯ ರಸ್ತೆಯಲ್ಲಿ 7 ಕಿ.ಮೀ. ದೂರದ ’ನರಿಮೊಗರು’ ಎಂಬ ಸ್ಥಳದಲ್ಲಿ ವಿಶಾಲವಾದ ಎತ್ತರ ಪ್ರದೇಶದಲ್ಲಿ ತೆಂಗು-ಕಂಗು ಹಾಗೂ ಹಸಿರ ಬನರಾಶಿಗಳ ನಡುವೆ ಕಂಗೊಳಿಸುತ್ತಿದೆ. ಶ್ರೀ ದೇವಳವು ಕರ್ನಾಟಕ ಮುಜರಾಯಿ ಇಲಾಖೆಯ ಮೇಲ್ವಿಚಾರಣೆಯಲ್ಲಿದ್ದು ವ್ಯವಸ್ಥಾಪನಾ ಸಮಿತಿಯ ನೇತೃತ್ವವನ್ನು ಯುವ ಧಾರ್ಮಿಕ ಸೇವಾಕಾಂಕ್ಷಿ ಶ್ರೀ ಜಯಂತ ನಡುಬೈಲು ಇವರು ವಹಿಸಿಕೊಂಡಿದ್ದು, ಒಟ್ಟು ಒಂಭತ್ತು ಜನ ಮಹನೀಯ ಸದಸ್ಯರುಗಳ ತೊಡಗಿಸುವಿಕೆಯಿಂದ ದೇವಳದ ದೇವತಾ ಕಾರ್ಯಗಳು ಸುಸೂತ್ರವಾಗಿ ನಡೆಯುತ್ತಾ ಪ್ರಗತಿ ಪಥದಲ್ಲಿದೆ. ಶ್ರೀ ದೇವಳವು ಕರ್ನಾಟಕ ರಾಜ್ಯದ ಮುಜರಾಯಿ ಇಲಾಖೆಗೆ ಒಳಪಟ್ಟ ಏಕೈಕ ಶ್ರೀ ಮೃತ್ಯುಂಜಯೇಶ್ವರ ದೇವಾಲಯವಾಗಿದೆ.
ಪುರಾಣದ ಮಹಿಮೆಯನ್ನು ಹೊಂದಿರುವ ಈ ಕ್ಷೇತ್ರವು ಸುಮಾರು 950 ವರ್ಷಗಳಿಗೂ ಮಿಕ್ಕಿ ಪುರಾತನವಾಗಿದೆ. ಕಾಲ ಕಾಲಕ್ಕೆ ಜೀರ್ಣೋದ್ಧಾರಗೊಳ್ಳುತ್ತಾ ಅಭಿವೃದ್ಧಿಯಾಗುತ್ತಿರುವ ಈ ದೇವಾಲಯಕ್ಕೆ ಮೊದಲು ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ರಸ್ತೆಯಿಂದ ಕಾಲುದಾರಿಯ ಸಂಪರ್ಕ ಮಾತ್ರ ಇತ್ತು. ಇತ್ತೀಚೆಗೆ ಸುಮಾರು 100 ವರ್ಷಗಳ ಹಿಂದಿನಿಂದ, ಕಾರಣಾಂತರಗಳಿಂದ ಪೂಜಾ ಕೈಂಕರ್ಯಗಳು ಕುಂಠಿತಗೊಂಡು ನಿಂತು ಹೋಗಿದ್ದು, ದೋಷಗಳು ಕಂಡು ಬಂದಾಗ, ಊರ ಸಜ್ಜನ ಆಸ್ತಿಕ ಮಹನೀಯರೆಲ್ಲರೂ ಒಟ್ಟಾಗಿ ದೇವಳದ ಜೀರ್ಣೋದ್ಧಾರ ಹಾಗೂ ಬ್ರಹ್ಮಕಲಶದ ಸಂಕಲ್ಪ ಕೈಗೊಂಡು 2008ನೇ ಇಸವಿಯಲ್ಲಿ “ನ ಭೂತೋ ನ ಭವಿಷ್ಯತಿ” ಎಂಬಂತೆ ಶ್ರೀಮತಿ ನಳಿನಿ ಲೋಕಪ್ಪ ಗೌಡರ ನೇತೃತ್ವದಲ್ಲಿ ಊರ ಪರವೂರ ಭಕ್ತಾಧಿಗಳ ಸಹಕಾರದೊಂದಿಗೆ ಕೇವಲ 145 ದಿನಗಳಲ್ಲಿ ಸಧೃಡ ಹಾಗೂ ಸುಂದರವಾದ ದೇವಾಲಯವು ಮತ್ತೆ ಪ್ರತ್ಯಕ್ಷವಾಗಿ ಕಂಗೊಳಿಸಿತು. ಇದಕ್ಕೆ ಪ್ರತ್ಯಕ್ಷ ಪರೋಕ್ಷವಾಗಿ ತೊಡಗಿಸಿಕೊಂಡ ಮಹನೀಯರುಗಳು ಹಾಗೂ ಸಂಘ-ಸಂಸ್ಥೆಗಳು ಪುಣ್ಯಶಾಲಿಗಳೆಂಬುವುದು ಆಸ್ತಿಕ ಮಹಾಜನರ ನಂಬಿಕೆ. ಎಲ್ಲಕ್ಕಿಂತ ಮುಖ್ಯವಾಗಿ ಶ್ರೀ ಮೃತ್ಯುಂಜಯೇಶ್ವರನು ತಾನು ಅಪೇಕ್ಷಿಸಿದ ಕಾಲ ಘಟ್ಟದಲ್ಲಿ ಸರ್ವರನ್ನೂ ಒಗ್ಗೂಡಿಸಿ ತನ್ನ ದೇವಾಲಯವನ್ನು ಮತ್ತೆ ವಿಜೃಂಭಿಸುವಂತೆ ಮಾಡಿರುವನೆಂದರೆ ಅದು ಅತಿಶಯೋಕ್ತಿಯಲ್ಲ. ಕಾಲ ಕಾಲಕ್ಕೆ ಮತ್ತೂ ಅಭಿವೃದ್ಧಿ ಹೊಂದುತ್ತಾ ಇತ್ತೀಚೆಗೆ ಊರ ಹಾಗೂ ಪರವೂರವರ ತನು-ಮನ-ಧನಗಳ ಸಹಕಾರ ಹಾಗೂ ಸರಕಾರದ ಸಕಾಲಿಕ ಅನುದಾನಗಳಿಂದ ದೇವಳದ ಒಳಾಂಗಣಕ್ಕೆ ಇಂಟರ್ಲಾಕ್ ಅಳವಡಿಕೆ ಸಂಪರ್ಕ ರಸ್ತೆಯು ಅಭಿವೃದ್ಧಿ ಹಾಗೂ ಕಾಂಕ್ರೀಟಿಕರಣಗೊಂಡಿದೆ. ಈಗ ದೇವಳದ ದಕ್ಷಿಣ ಭಾಗದಲ್ಲಿ ಪೂರ್ಣ ಪ್ರಮಾಣದ ಪಾಕಶಾಲೆ, ಭೋಜನಶಾಲೆ ಹಾಗೂ ಸಭಾಭವನದ ನಿರ್ಮಾಣ ಪ್ರಗತಿಯ ಹಂತದಲ್ಲಿದೆ. ಸ್ಥಳ ಪುರಾಣ ನಂಬಿಕೆಗಳ ಪ್ರಕಾರ ಖರಾಸುರನೆಂಬ ಅಸುರನು ಪುರಾಣ ಕಾಲದಲ್ಲಿ ಹಿಮಾಲಯದಲ್ಲಿ ಶಿವನ ಸಾಕ್ಷಾತ್ಕಾರಕ್ಕಾಗಿ ಕಠಿಣ ವೃತಪೂರ್ವಕ ತಪಸ್ಸನ್ನಾಚರಿಸಲು, ಶಿವನು ಪ್ರಸನ್ನನಾಗಿ ಆತನಿಗೆ ವರ ಪ್ರಸಾದವಾಗಿ ಮೂರು ಶಿವಲಿಂಗಗಳನ್ನು ನಿತ್ಯ ಪೂಜಾ ವಿನಿಯೋಗಕ್ಕಾಗಿ ಅನುಗ್ರಹಿಸಿದನು. ಖರಾಸುರನು ಅವುಗಳಲ್ಲಿ ಎರಡನ್ನು ತನ್ನ ಎರಡು ಕೈಗಳಲ್ಲೂ ಒಂದನ್ನು ತನ್ನ ನಾಲಿಗೆಯಲ್ಲೂ ಇರಿಸಿಕೊಂಡು ಭೂಲೋಕವನ್ನು ಸುತ್ತುತ್ತಾ ಪಾತಾಳದೆಡೆಗೆ ಪ್ರಯಾಣಿಸಿದನು. ಮಾರ್ಗ ಮಧ್ಯೆ ಆಯಾಸ ಪರಿಹಾರಕ್ಕಾಗಿ ಸೂಕ್ತವಾದ ಪ್ರಕೃತ ಪರಿಸರದಲ್ಲಿ ವಿಶ್ರಮಿಸಲೆಂದು ಕುಳಿತಾಗ ನಾಲಗೆಯಲ್ಲಿ ಇರಿಸಿದ ಲಿಂಗವನ್ನು ಪ್ರಕೃತ ಸ್ಥಳದಲ್ಲಿ ಉಳಿದ ಲಿಂಗಗಳನ್ನು ತನ್ನ ಎಡಬಲ ಬಾಹುಗಳನ್ನು ವಿಶಾಲವಾಗಿ ಚಾಚಿ ಇರಿಸಿ ಪೂಜಿಸಿದನು. ಹೀಗಿರುವಾಗ ಮಧ್ಯದಲ್ಲಿ ಇರಿಸಿದ ಲಿಂಗವೇ ಶ್ರೀ ಮೃತ್ಯುಂಜಯೇಶ್ವರನೆಂದೂ ಎಡ ಬಲಗಳಲ್ಲಿ ಶ್ರೀ ಉಮಾಮಹೇಶ್ವರ ಹಾಗೂ ಸದಾಶಿವ ಲಿಂಗಗಳೆಂದೂ ತದನಂತರ ಅವುಗಳನ್ನು ಪ್ರತಿಷ್ಠಾಪಿಸಿ ಪೂಜಿಸಿದನೆಂದೂ ಪುರಾಣದ ಪ್ರತೀತಿ. ಇದು ಜನರ ತಲೆ ತಲಾಂತರಗಳ ಶ್ರದ್ಧಾಭಕ್ತಿಯ ನಂಬಿಕೆ.
ಮುಂದಿನ ದಿನಗಳಲ್ಲಿ ಶ್ರೀ ಕ್ಷೇತ್ರವು ಭಕ್ತ ಜನರ ಸೇವಾ ಕೈಂಕರ್ಯಗಳ ಏರಿಳಿತಗಳೊಂದಿಗೆ ಅಭಿವೃದ್ಧಿಗೊಳ್ಳುತ್ತ ಸಾನ್ನಿಧ್ಯ ವೃದ್ಧಿಯಾಗುತ್ತ ಬಂದು ಇಂದಿನ ದಿನಗಳಲ್ಲಿ ಪೂರ್ಣ ಪ್ರಮಾಣದಲ್ಲಿ ಪ್ರಕಾಶಿಸುತ್ತಿದೆ. ಶ್ರೀ ಕ್ಷೇತ್ರದಲ್ಲಿ ನಿತ್ಯ ಎರಡು ಹೊತ್ತು ಶ್ರೀ ದೇವರಿಗೆ ಪೂಜೆ ನಡೆಯುತ್ತದೆ. ಭಕ್ತ ಜನರಿಂದ ಪ್ರತಿ ಸೋಮವಾರಂದು, ಶಿವರಾತ್ರಿಯಂದು ಹಾಗೂ ಧನುರ್ಮಾಸದಲ್ಲಿ ಪ್ರತಿದಿನ ರುದ್ರ ಹಾಗೂ ವೇದ ಪಾರಾಯಣಗಳು ಮತ್ತು ಭಜನಾ ಸೇವೆಗಳು ನಡೆಯುತ್ತವೆ. ತತ್ಫಲವಾಗಿ ಶ್ರೀ ಕ್ಷೇತ್ರದಲ್ಲಿ ಸಾನ್ನಿಧ್ಯ ವೃದ್ಧಿಯಾಗಿರುವುದರ ಸೂಚನೆಯಾಗಿ ಭಕ್ತ ಮಹಾಜನರು ಬೇಡಿಕೊಳ್ಳುವ ಅಭೀಷ್ಠಗಳು ಈಡೇರಿ ದೇವರಿಗೆ ಯಥಾನುಶಕ್ತಿ ಸೇವಾದಿಗಳು ಸಲ್ಲುತ್ತಿರುವುದು ಸರ್ವ ವೇದ್ಯ. ಶ್ರೀ ದೇವಳದಲ್ಲಿ ಶ್ರೀ ಮೃತ್ಯುಂಜಯ ಹೋಮವು ವಿಶೇಷವಾದ ಸೇವೆಯಾಗಿದೆ. ಅಲ್ಲದೆ ಇನ್ನಿತರ ಧಾರ್ಮಿಕ ಹೋಮ ಹವನ ಪೂಜಾದಿಗಳನ್ನು ಭಕ್ತ ಜನರ ಅಪೇಕ್ಷಾನುಸಾರವಾಗಿ ವೈದಿಕ ಮಾರ್ಗದರ್ಶನದೊಂದಿಗೆ, ಕ್ರಿಯಾ ಲೋಪವಾಗದಂತೆ ಕಾರ್ಯಗತಗೊಳಿಸುವಲ್ಲಿ ಅರ್ಚಕ ಹಾಗೂ ವ್ಯವಸ್ಥಾಪನಾ ಸಮಿತಿ ಸದಾ ಜಾಗೃತವಾಗಿ ಕಾರ್ಯ ನಿರ್ವಹಿಸುತ್ತದೆ. ಪ್ರತಿ ತಿಂಗಳ ಸಂಕಷ್ಠಿ ದಿನದಂದು ಗಣಪತಿ ಹವನ, ಭಕ್ತರು ಅಪೇಕ್ಷಿಸಿದ ದಿನ ಸಂಧಿಶಾಂತಿ ಹೋಮ ಇತ್ಯಾದಿಗಳೂ ಶ್ರೀ ಮೃತ್ಯುಂಜಯ ದೇವರ ಸನ್ನಿಧಿಯಲ್ಲಿ ನಡೆಯುತ್ತವೆ. ಭಕ್ತಾಧಿಗಳ ಅಭೀಷ್ಠವನ್ನು ಅಭಯ ಹಸ್ತದಿಂದ ಈಡೇರಿಸುವ ಶ್ರೀ ಮೃತ್ಯುಂಜಯೇಶ್ವರ ದೇವರ ಸಾನ್ನಿಧ್ಯವು ದಿನದಿಂದ ದಿನಕ್ಕೆ ವೃದ್ಧಿಯಾಗುತ್ತಾ ದೇವಳದ ಮಹಿಮೆಯ ಖ್ಯಾತಿಯು ಪಸರಿಸಿರುವುದಕ್ಕೆ ಅಲ್ಲಿಂದ ಬಂದು ಸೇವೆ ಸಲ್ಲಿಸುತ್ತಿರುವ ಭಕ್ತ ಜನರ ಗಡಣವೇ ಸಾಕ್ಷಿ. ಶ್ರೀ ದೇವರ ಕೃಪಾಕಟಾಕ್ಷ ಎಲ್ಲರ ಮೇಲೂ ಅನುಗ್ರಹೀತವಾಗಿ ಸರ್ವರಿಗೂ ಮಂಗಳವಾಗಲಿ ಎಂಬುವುದೇ ಎಲ್ಲ ಭಕ್ತ ಜನರ ಹಾರೈಕೆ.
ವ್ಯಾವಸ್ಥಾಪನಾ ಸಮಿತಿ:
ಬಿ. ಟಿ. ಮಹೇಶ್ಚಂದ್ರ ಸಾಲಿಯಾನ್ ನಡುಬೈಲುಗುತ್ತು | ಅಧ್ಯಕ್ಷರು |
ಕುತ್ತಿಗದ್ದೆ ಜನಾರ್ದನ ಜೋಯಿಸ | ಸದ್ಯಸರು |
ಸೀತಾರಾಮ ಗೌಡ ಮುಂಡತ್ತೋಡಿ | ಸದ್ಯಸರು |
ಶ್ರೀಮತಿ ನಳಿನಿ ಲೋಕಪ್ಪ ಗೌಡ, ಕರಮನೆ | ಸದ್ಯಸರು |
ಗಣೇಶ್ ನಾಯ್ಕ್ ಕೋಡಿಬೈಲು | ಸದ್ಯಸರು |
ಶ್ರೀಮತಿ ಶಕುಂತಳಾ ನೀಲಪ್ಪ ಪೂಜಾರಿ ಕುರೆಮಜಲು | ಸದ್ಯಸರು |
ಜಯಾನಂದ ಆಳ್ವ ಅಜಲಾಡಿ, ಪಟ್ಟೆ | ಸದ್ಯಸರು |
ಪ್ರಕಾಶ್ ಪುರಷರಕಟ್ಟೆ | ಸದ್ಯಸರು |
ರಮೇಶ್ ಬೈಪಡಿತ್ತಾಯ | ಅರ್ಚಕರು |